ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಯೋಜನೆ
ನಮ್ಮ ಕರ್ನಾಟಕ ರಾಜ್ಯದ ಭವ್ಯ ಇತಿಹಾಸ, ಚರಿತ್ರೆ ಮತ್ತು ನಮ್ಮ ಶ್ರೀಮಂತ ಧೀಮಂತ ನಾನ್ನುಡಿಯಾದ ಕನ್ನಡ ಭಾಷೆ, ಅದರ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಉದ್ಯಾನವನಗಳಲ್ಲಿ ಫಲಕಗಳು, ಧ್ವನಿ ಮುದ್ರಣಗಳು, ದೃಶ್ಯ ತುಣುಕುಗಳು, ಆಕೃತಿಗಳು, ಸ್ಮಾರಕಗಳು ಇವುಗಳ ಮೂಲಕ ಕನ್ನಡೇತರರನ್ನು ಒಳಗೊಂಡು ಉದ್ಯಾನವನವನ್ನು ಸಂದರ್ಶಿಸಲು ಬರುವ ಪ್ರತಿಯೊಬ್ಬರಿಗೂ ಪರಿಚಯ ಮಾಡುವ ನಿಟ್ಟಿನಲ್ಲಿ ಮೂಡಿರುವ ಯೋಜನೆಯು“ಕ-ವನ”ಅರ್ಥಾತ್“ಕನ್ನಡ-ವನ”.
ಕನ್ನಡ ಮತ್ತು ಕನ್ನಡಿಗನ ನಿತ್ಯೋತ್ಸವವನ್ನು ವಿಶ್ವಕ್ಕೆ ಸಾರುವ ಯೋಜನೆ "ಕ-ವನ" (ಕನ್ನಡ-ವನ)
ನಿಮ್ಮಲ್ಲಿ ನಮ್ಮ ಮನವಿ
ಈ ಯೋಜನೆಯನ್ನು ತಮ್ಮ ವ್ಯಾಪ್ತಿಯಲ್ಲಿ ಬರುವ, ಯಾವುದಾದರೊಂದು ಸೂಕ್ತ ಸ್ಥಳದಲ್ಲಿ ಅನುಷ್ಠಾನಗೊಳಿಸಲು ಪ್ರಯತ್ನಿಸಿ.
ಈ ಯೋಜನೆ ಸಾರ್ವಜನಿಕರಿಗೆ ಕನ್ನಡ ಭಾಷೆಯ ಆಳ ಮತ್ತು ಕರ್ನಾಟಕ ರಾಜ್ಯದ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ಮನದಟ್ಟು ಮಾಡುತ್ತದೆ ಹಾಗೂ ಕನ್ನಡಕ್ಕೆ ಸಂಭಂದಪಟ್ಟ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಷ್ಟು ಜ್ಞಾನ ವನ್ನು ಕೊಟ್ಟು ಕ್ರಾಂತಿ ಉಂಟು ಮಾಡುತ್ತದೆ ಎಂದು ನಮ್ಮ ಅನಿಸಿಕೆ.
ಈ ಯೋಜನೆ ತಮ್ಮಿಂದ ಯಶಸ್ವಿಯಾಗುತ್ತದೆ ಮತ್ತು ಕರ್ನಾಟಕಕ್ಕೆ, ಕನ್ನಡಿಗರಿಗೆ, ಕನ್ನಡೇತರರಿಗೆ ಒಂದು ಚಿರನೂತನವಾದ ಕೊಡುಗೆಯಾಗಿ ಉಳಿಯುತ್ತದೆ ಎಂದು ನಮ್ಮ ಭಾವನೆ.
ಯೋಜನೆಯ ಉದ್ದೇಶ
“ಕ-ವನ” ದ ಸಂಪೂರ್ಣ ಯೋಜನೆಯನ್ನು ಬೃಹದಾಕಾರವಾಗಿ "ಡಿಸ್ನಿ ಲ್ಯಾಂಡ್" ಮಾದರಿಯಲ್ಲಿ ಅನುಷ್ಠಾನಗೊಳಿಸಿ, ಕನ್ನಡ ಮಾತೆಗೆ ಒಂದು ಅಪೂರ್ವವಾದ ಮತ್ತು ಚಿರನೂತನ ಕೊಡುಗೆಯಾಗಿ ಅರ್ಪಿಸುವುದು ನಮ್ಮ ಮೂಲ ಉದ್ದೇಶ.
ಈ ಕನ್ನಡ-ವನ ವನ್ನು ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಕನ್ನಡ ಭಾಷೆಯ ಹಿರಿಮೆಯನ್ನು ಸಾರಿ ಅದರ ಸವಿಯ ರಸದೌತಣವನ್ನು ಉಣಬಡಿಸುವಂತೆ ಮಾಡುವುದೇ ಈ ಯೋಜನೆಯ ಪ್ರಮುಖ ಉದ್ದೇಶ.
ಕನ್ನಡಕ್ಕೆ ಮತ್ತು ಕರ್ನಾಟಕಕ್ಕೆ ಸಂಭಂದಿಸಿದ ವಿಷಯಗಳನ್ನು, ಫಲಕಗಳು, ಧ್ವನಿ ಮುದ್ರಣಗಳು, ದುಶ್ಯ ತುಣುಕುಗಳು, ಆಕೃತಿಗಳು, ಸ್ಮಾರಕಗಳ ಮೂಲಕ ಪರಿಚಯಿಸಬಹುದಾಗಿದೆ.